Chaitanya Consultancy

Featured Posts

ಮರಕುಂಬಿ ಕ್ಷೌರ ಸಮಸ್ಯೆ : ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಧೋರಣೆಗೆ pucl ಖಂಡನೆ

ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ಕೇಸರಟ್ಟಿ ಗ್ರಾಮ ಪಂಚಾಯತಿ …

Wednesday, August 14, 2013

ಬಿಆರ್‌ಜಿಎಫ್ ನಿಧಿ ಯೋಜನೆಗೆ ಕೊಪ್ಪಳ ಜಿಲ್ಲೆ ಸೇರಿಸಲು ಸಂಸದ ಶಿವರಾಮಗೌಡ ಒತ್ತಾಯ

  ಹಿಂದುಳಿದ ಪ್ರದೇಶಗಳ ಅನುದಾನ ನಿಧಿBRGF) ಯೋಜನೆಯಡಿ ಲಭ್ಯವಾಗಬೇಕಾದ ಅನುದಾನವನ್ನು ಕೊಪ್ಪಳ ಜಿಲ್ಲೆಗೆ ಬಿಡುಗೊಳಿಸಲು ಕೇಂದ್ರ ಪಂಚಾಯತ್‌ರಾಜ್ ಸಚಿವ ಕಿಶೋರ್ ಚಂದ್ ದೇವ್ ಅವರಿಗೆ ಕೊಪ್ಪಳ ಸಂಸದ ಶಿವರಾಮಗೌಡ ಅವರು ಒತ್ತಾಯಿಸಿದ್ದಾರೆ.
  ಈ ಕುರಿತಂತೆ ನವದೆಹಲಿಯಲ್ಲಿನ ಕೇಂದ್ರ ಪಂಚಾಯತಿರಾಜ್ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿರುವ ಸಂಸದ ಶಿವರಾಮಗೌಡ ಅವರು, ಪ್ರಾದೇಶಿಕ ಅಸಮತೋಲನವನ್ನು ಕಡಿಮೆ ಮಾಡಲು ರೂಪಿಸಿರುವ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಃಖಉಈ)ಯನ್ನು ಕೇಂದ್ರ ಸರ್ಕಾರದ ಪಂಚಾಯತ್ ರಾಜ್ ಸಚಿವಾಲಯವು ನಿರ್ವಹಿಸುತ್ತದೆ.  ಕೊಪ್ಪಳ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದ್ದು, ಬಿಆರ್‌ಜಿಎಫ್ ನಿಧಿಯಡಿ ಜಿಲ್ಲೆಗೆ ಅನುದಾನ ಬಿಡುಗಡೆ ಆಗುತ್ತಿಲ್ಲ.  ಈ ಹಿಂದಿನ ರಾಷ್ಟ್ರೀಯ ಸಮವಿಕಾಸ ಯೋಜನೆಯನ್ನು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ (ಬಿಆರ್‌ಜಿಎಫ್) ಯನ್ನಾಗಿ ಪರಿವರ್ತಿಸಿದ್ದು ಇದು ಶೇ. ೧೦೦ ರಷ್ಟು ಕೇಂದ್ರ ಸರ್ಕಾರದ ಅನುದಾನವಾಗಿದೆ. ಕರ್ನಾಟಕದ ೬ ಜಿಲ್ಲೆಗಳಲ್ಲಿ ಇದನ್ನು ಜಾರಿಗೊಳಿಸಲಾಗಿದ್ದು, ರಾಜ್ಯದ ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಹೈದ್ರಾಬಾದ-ಕರ್ನಾಟಕದ ಬೀದರ, ಗುಲ್ಬರ್ಗಾ, ರಾಯಚೂರು ಜಿಲ್ಲೆಗಳಿಗೆ ಪ್ರತಿವರ್ಷವೂ ಹಾಗೂ ಕಳೆದ ವರ್ಷದಿಂದ ಯಾದಗಿರಿ ಜಿಲ್ಲೆಗೂ ಸಹ ಈ ಅನುದಾನವನ್ನು ಕೇಂದ್ರವು ಬಿಡುಗಡೆಗೊಳಿಸುತ್ತಿದೆ. ಆದರೆ, ೧೯೯೭ ರಲ್ಲಿ ರಾಯಚೂರು ಜಿಲ್ಲೆಯಿಂದ ಬೇರ್ಪಟ್ಟ ಕೊಪ್ಪಳ ಜಿಲ್ಲೆಗೆ ಮಾತ್ರ ಈ ಹಿಂದುಳಿದ ಪ್ರದೇಶಗಳ ಅನುದಾನ ನಿಧಿ(ಃಖಉಈ)ಯಡಿ ಅನುದಾನವನ್ನು ಬಿಡುಗಡೆಗೊಳಿಸಲು ಕೇಂದ್ರವು ಮುಂದಾಗುತ್ತಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಮತ್ತು ಸದಸ್ಯರಾದ ಡಾ|| ಕಸ್ತೂರಿ ರಂಗನ್ ರವರನ್ನು ಖುದ್ದಾಗಿ ಹಲವು ಬಾರಿ ಭೇಟಿಯಾಗಿ ವಿವರಣೆ ನೀಡಿದರೂ ಸಹ, ಇದುವರೆಗೂ ಸೂಕ್ತ ಸ್ಪಂದನೆ ನೀಡಿಲ್ಲ.  ಪ್ರಾದೇಶಿಕ ಅಸಮತೋಲನೆ ಅಧ್ಯಯನದ ಡಾ: ಡಿ.ಎಂ. ನಂಜುಡಪ್ಪ ಸಮಿತಿಯ ವರದಿಯ ಪ್ರಕಾರ ಹಿಂದುಳಿದ ಪ್ರದೇಶವೆನ್ನುವ ಹಣೆಪಟ್ಟಿಯನ್ನು ಕೊಪ್ಪಳ ಜಿಲ್ಲೆಯು ಹೊಂದಿದೆ. ಬೀದರ, ಗುಲ್ಬರ್ಗಾ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಹೈದ್ರಾಬಾದ್-ಕರ್ನಾಟಕದ ಭಾಗವಾಗಿದ್ದು, ಈ ನಾಲ್ಕೂ ಜಿಲ್ಲೆಗಳಿಗಿಂತಲೂ ಕೊಪ್ಪಳ ಜಿಲ್ಲೆಯು ಶೈಕ್ಷಣಿಕ, ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದ್ದು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆ(ಃಖಉಈ)ಯಡಿ ಅನುದಾನ ಪಡೆಯಲು ಅರ್ಹವಾಗಿರುತ್ತದೆ.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯನ್ನು ಹಿಂದುಳಿದ ಪ್ರದೇಶಗಳ ಅನುದಾನ ನಿಧಿ ಯೋಜನೆ(ಃಖಉಈ)ಗೆ ಶೀಘ್ರ ಒಳಪಡಿಸುವಂತೆ ಕೇಂದ್ರ ಪಂಚಾಯತ್‌ರಾಜ್ ಸಚಿವ ಕಿಶೋರ್ ಚಂದ್ ದೇವ್ ಅವರಿಗೆ ಸಂಸದ ಶಿವರಾಮಗೌಡ ಅವರು ಮನವಿ ಸಲ್ಲಿಸಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ, ಕೇಂದ್ರ ಸಚಿವರು, ಕೊಪ್ಪಳ ಜಿಲ್ಲೆಗೆ ಬಿಆರ್‌ಜಿಎಫ್ ಯೋಜನೆಯನ್ನು ಮಂಜೂರು ಮಾಡಲು ಅಗತ್ಯ ಕ್ರಮವಹಿಸುವಂತೆ ಯೋಜನಾ ಆಯೋಗದ ಉಪಾಧ್ಯಕ್ಷರಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

Friday, July 19, 2013

ಗೂಗ್ಲಿ ಚಿತ್ರ ವಿಮರ್ಶೆ




ಮಾತು ಮಾತಿನಲ್ಲೂ ಗೂಗ್ಲಿ ಎಸೆತ, ಸೆಂಚುರಿ ಖಚಿತ

        ರ್‍ಯಾಂಕ್ ಸ್ಟೂಡೆಂಟ್ ಆದರೂ ತುಂಬಾ ತರ್‍ಲೆ. ಹುಡುಗೀರೆಂದರೆ ಮಾರುದ್ದ ದೂರ ನಿಲ್ಲೋ ಹುಡುಗ ಅಚಾನಕ್ಕಾಗಿ ಲವ್ವಲ್ಲಿ ಬಿದ್ದು ಒದ್ದಾಡಿ, ಬದುಕಲ್ಲಿ, ಲವ್ವಲ್ಲಿ ಮೇಲೆದ್ದು ಬರುವ ಕಥೆಯನ್ನು ಪವನ್ ಒಡೆಯರ್ ಇಂಟರೆಸ್ಟಿಂಗ್ ಆಗಿ, ಕ್ಯಾಚಿ ಡೈಲಾಗ್‌ಗಳಿಂದ, ಗೂಗ್ಲಿಯಂಥ ಮಾತಿನ ಎಸೆತಗಳಿಂದ, ಬೌಂಡರಿ ಬಾರಿಸುವಂಥ ಹಾಡುಗಳಿಂದ, ಸಿಕ್ಸರ್ ಹೊಡೆಯುವಂಥ ಫೈಟ್‌ಗಳಿಂದ ಎರಡೂವರೆ ಗಂಟೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ.
      ಪ್ಯಾರ್‌ಗೆ ಆಗ್ ಬುಟೈತೆ ಹಾಡಿನಿಂದಲೇ ಸದ್ದುಮಾಡಿದ್ದ ಗೋವಿಂದಾಯನಮಃ ಸಿನಿಮಾ ಕಥೆಯ ನಿರೂಪಣೆಯೂ ಗೆದ್ದಿತ್ತು. ಆ ಮೂಲಕ ಪವನ್ ಒಡೆಯರ್ ಭರವಸೆ ಮೂಡಿಸಿದ್ದರು. ಲೋ ಬಜೆಟ್ ಆಗಿದ್ದರೂ ಸಿನಿಮಾ ಸೂಪರ್‌ಹಿಟ್ ಆಗಿತ್ತು. ಈಗ ಪವನ್ ಒಡೆಯರ್ ಬಿಗ್ ಬಜೆಟ್ ಸಿನಿಮಾವನ್ನು ತುಂಬಾ ರಿಚ್ ಆಗಿ,   ಸ್ಟೈಲಿಶ್ ಆಗಿ ತೆರೆಗೆ ತಂದು ಜನರಿಗೆ ರೀಚ್ ಆಗಿದ್ದಾರೆ.
       ಅನಾಥ ಯುವತಿಗೆ ಡಾಕ್ಟರ್ ಆಗುವ ಕನಸು. ಗೊತ್ತು ಗುರಿ ಇಲ್ಲದ ಆತನಿಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ಯೋಚನೆ-ಯೋಜನೆ ಇದ್ದರೂ ಮಹಾನ್ ಕಿರಾತಕ. ಕಾಲೇಜಿನ ಪ್ರಿನ್ಸಿಯನ್ನೇ ಬಿಡದ ಶರತ್ ಹುಡುಗೀರನ್ನ ಬಿಡ್ತಾನಾ? ಅದಕ್ಕೆ ಕಾಲೇಜಿನಲ್ಲಿ ಯಾರೂ ಆತನ ತಂಟೆಗೆ ಹೋಗಲ್ಲ, ಮಾತನಾಡಿಸಲ್ಲ. ಇವನು ಅಷ್ಟೇ. ಯಾರೂ ತಂಟೆಗೆ ಹೋಗಲ್ಲ ಆದರೆ ಯಾರಾದರೂ ಹುಡುಗಿರನ್ನ ಚುಡಾಯಿಸಿದರೆ ಗುನ್ನಾ ಗ್ಯಾರಂಟಿ.
        ಆದರೂ ಶರತ್ ರ್‍ಯಾಂಕ್ ಸ್ಟೂಡೆಂಟ್. ಶರತ್‌ನ ಮಾತಿನ ಮೋಡಿಗೆ, ಜಾಣತನಕ್ಕೆ ಸ್ವಾತಿ ಫೀದಾ. ಸ್ವಾತಿಯ ನಗು, ಮುಂಗುರುಳು, ಕೇರ್‌ನೆಸ್‌ನಿಂದಾಗಿ ಲವ್ ಎಂದರೆ ಮೂಗು ಮುರಿಯುವ ಶರತ್ ಸ್ವಾತಿಗೆ ಮನಸು ಕೊಡುತ್ತಾನೆ. ಆದರೆ ಇಬ್ಬರಿಗೂ ಇಷ್ಟವಿದ್ದರೂ ಫಸ್ಟ್ ಪ್ರಪೋಸ್‌ಗಾಗಿ ಕಾಯುವಾಟ. ಇನ್ನೇನು ಪ್ರಪೋಸ್ ಮಾಡಬೇಕು ಎನ್ನುವಷ್ಟರಲ್ಲಿ ಸ್ವಾತಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿರುತ್ತಾಳೆ. ಅಲ್ಲಿ ಸಹಪಾಠಿಯೊಬ್ಬ ಆಕೆಯನ್ನು ಉಪಚರಿಸುತ್ತಿದ್ದಾನೆ. ಇದನ್ನ ಕಂಡ ಶರತ್ ರಂಪಾಟ ಅಷ್ಟೇ ಅಲ್ಲ ಲವ್‌ನ್ನೇ ಕಟ್ ಮಾಡಿ ಹೊರಟು ಬಿಡುತ್ತಾನೆ.
       ಎಷ್ಟೇ ಆದರೂ ಫಸ್ಟ್ ಲವ್ ಅಲ್ವಾ ಮರೆಯೋಕೆ ಆಗಲ್ಲ. ಘಟನೆ ನಡೆದು ಎರಡು ವರ್ಷಗಳೇ ಉರುಳಿ, ಶರತ್ ದೇಶದ ಮಹಾನ್ ವಾಣಿಜ್ಯೋದ್ಯಮಿಯಾದರೂ ಸ್ವಾತಿಯ ಪ್ರೀತಿಯ ಸೆಳೆತ ಇದ್ದೇ ಇರುತ್ತೆ. ಸ್ವಾತಿಯ ಜನುಮ ದಿನದಂದು ಫೊನ್‌ನಲ್ಲಿ ಪ್ರಪೋಸ್ ಮಾಡಿದರೂ ಆಕೆ ಪ್ರೀತಿ ನಿರಾಕರಿಸುತ್ತಾಳೆ. ಅಲ್ಲಿಗೆ ಭಗ್ನಪ್ರೇಮಿಯಂಥಾದ ಶರತ್ ವಿದೇಶದಿಂದ ಮರಳಿ ಭಾರತಕ್ಕೆ ಬಂದು ಹೆತ್ತವರ ಅಣತಿಯಂತೆ ಮದುವೆಯಾಗಲು ಸಿದ್ಧನಾಗುತ್ತಾನೆ.
         ಆಕಸ್ಮಿಕವಾಗಿ ಮತ್ತೇ ಶರತ್‌ಗೆ ಕಾಣುವ ಸ್ವಾತಿ ಮತ್ತೇ ಆತನಿಗೆ ಸಿಗ್ತಾಳಾ. ಇಬ್ಬರೂ ಹೇಗೆ ಭೇಟಿಯಾಗ್ತಾರೆ. ಒಂದಾಗ್ತಾರಾ ಎನ್ನುವುದನ್ನು ತುಂಬಾ ನೀಟಾಗಿ ಪವನ್ ಒಡೆಯರ್ ಹೇಳಿದ್ದಾರೆ. ಆದರೆ ಇಬ್ಬರ ಮುನಿಸಿಗೆ ಅಂಥ ಗಾಢವಾದ ಕಾರಣ ಎಲ್ಲೂ ಕಾಣಲ್ಲ. ಅದರ ಬಗ್ಗೆ ಪವನ್ ಕೊಂಚ ವರ್ಕ್‌ಔಟ್ ಮಾಡಬೇಕಿತ್ತು ಎನಿಸುತ್ತದೆ. ಇದೊಂದನ್ನ ಬಿಟ್ಟರೆ ಪವನ್ ಮತ್ತೆಲ್ಲೂ ಸೋತಿಲ್ಲ.
         ಸ್ಟೈಲಿಶ್ ಹುಡುಗನಾಗಿ, ಬಿಸಿನೆಸ್‌ಮ್ಯಾನ್ ಆಗಿ, ತರ್‍ಲೆಯಾಗಿ, ವಿರಹಪ್ರೇಮಿಯಾಗಿ ಯಶ್ ಇಷ್ಟವಾಗುತ್ತಾರೆ. ಡ್ಯಾನ್ಸನಲ್ಲಿ, ಫೈಟ್‌ನಲ್ಲೂ ಯಶ್ ರಾಕಿಂಗ್ ಸ್ಟಾರ್. ನವಿರಾಗಿರುವ ಪ್ರೇಮಕಥೆಯಾಗಿದ್ದರೆ ಬಹುಶಃ ಗೂಗ್ಲಿ ಬೋರ್ ಆಗುತ್ತಿತ್ತು. ಮೊನಚಾದ ಡೈಲಾಗ್‌ಗಳಿಂದ ಹುಡುಗಿಯರನ್ನ ಬತಾ ಪಡ್ಡೆಗಳ ಮನಸು ಗೆಲ್ಲುವ ಮಾತುಗಳೇ ಚಿತ್ರದ ನಿಜವಾದ ಜೀವಾಳ. ಪವನ್ ಒಡೆಯರ್ ಚಿತ್ರಕಥೆ, ಸಂಭಾಷಣೆಯಲ್ಲಿ ಕೈ ಚಳಕ ತೋರಿಸಿದ್ದಾರೆ. ಕೃತಿ ಕರಬಂಧ ಪಾತ್ರಕ್ಕೆ ನ್ಯಾಯವೊದಗಿಸಿದ್ದಾರೆ. ಸಾಧುಕೋಕಿಲಾ ಓ ಮಲ್ಲಿಗೆಯ ಫೋಟೋಗ್ರಾಫರ್ ಮುಸ್ತಫಾ ಆಗಿ ಕೆಲವೇ ಹೊತ್ತಿದ್ದರೂ ನೆನಪಲ್ಲುಳಿಯುತ್ತಾರೆ. ಅನಂತ್‌ನಾಗ್ ಅಪ್ಪನಾಗಿ ಮತ್ತೊಮ್ಮೆ ಗೆದ್ದಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಜಯಣ್ಣ ಹಾಗೂ ಭೋಗೆಂದ್ರ ಸಿನಿಮಾದ ಅದ್ಧೂರಿಗೆ ಬೇಕಾದ್ದನ್ನೆಲ್ಲ ಕೊಟ್ಟಿರುವುದು ಎದ್ದು ಕಾಣುತ್ತದೆ. ಚಿತ್ರ ನೋಡಿ ಹೊರಬಂದ ಪ್ರೇಕ್ಷಕ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಂಥ ಪ್ರತಿಕ್ರಿಯೆ ಕೊಟ್ಟಿರುವುದನ್ನು ಗಮನಿಸಿದರೆ ಬಂಡವಾಳ ವಾಪಸ್ ಬರುವುದಂತೂ ಖಚಿತ. ಗೂಗ್ಲಿಗೆ ಶತಕ ಬಾರಿಸುವ ಎಲ್ಲ ಲಕ್ಷಣಗಳು ಇವೆ. ನೋಡಣ ಏನಾಗತ್ತೆ.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಶಾರದಾ ಚಿತ್ರಮಂದಿರ, ಕೊಪ್ಪಳ.
-----------------------------------------------





ಏರ್‌ಮನ್ ಭರ್ತಿ ರ್‍ಯಾಲಿ : ಸಮರ್ಪಕ ಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

ಕೊಪ್ಪಳದಲ್ಲಿ ಜು. ೩೧ ರಿಂದ ಏರ್‌ಮನ್ ಭರ್ತಿ ರ್‍ಯಾಲಿ : 


 ಭಾರತೀಯ ವಾಯುಪಡೆಯಲ್ಲಿನ ಗ್ರೂಪ್'ಎಕ್ಸ್' ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗೆ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜು. ೩೧ ರಿಂದ ನೇಮಕಾತಿ ರ್‍ಯಾಲಿ ನಡೆಯಲಿದ್ದು, ನೇಮಕಾತಿ ರ್‍ಯಾಲಿ ಸಮರ್ಪಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಏರ್‌ಮನ್ ನೇಮಕಾತಿ ರ್‍ಯಾಲಿ ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ ಹುದ್ದೆಗಳಿಗೆ ಕೊಪ್ಪಳದಲ್ಲಿ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಈ ರ್‍ಯಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದೆ.  ಆದ್ದರಿಂದ ಸುಮಾರು ೧೫೦೦ ರಿಂದ ೨೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕಾಗಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು.  ಜು. ೩೧ ರಂದು ಎಲ್ಲ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಮಾತ್ರ ಆಗಸ್ಟ್ ೦೧ ರಂದು ವೈದ್ಯಕೀಯ ಮತ್ತು ದೈಹಿಕ ಅರ್ಹತೆ ಪರೀಕ್ಷೆ ನಡೆಯಲಿದೆ.  ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್ ನಿರ್ಮಾಣ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು.  ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಕ್ರೀಡಾಂಗಣದ ಟ್ರ್ಯಾಕ್ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.  ತುರ್ತು ನಿರ್ವಹಣೆಗಾಗಿ ಆಂಬುಲೆನ್ಸ್ ಹಾಗೂ ತಜ್ಞ ವೈದ್ಯರು ನೇಮಕಾತಿ ರ್‍ಯಾಲಿ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಎಂ. ಬಿಜುಕುಮಾರ್ ಅವರು ಮಾತನಾಡಿ, ಏರ್‌ಮನ್ ನೇಮಕಾತಿ ರ್‍ಯಾಲಿಯನ್ನು ಮುಕ್ತ ಹಾಗೂ ಪಾರದರ್ಶಕತೆಯಿಂದ ನಡೆಸಲಾಗುವುದು.  ಅಭ್ಯರ್ಥಿಗಳು ಯಾವುದೇ ಮದ್ಯವರ್ತಿಗಳ ಆಮಿಷಕ್ಕೆ ಒಳಗಾಗದೆ ತಮ್ಮ ಸ್ವ ಸಾಮರ್ಥ್ಯದಿಂದ ಆಯ್ಕೆ ಆಗಬಹುದಾಗಿದೆ.  ಲಿಖಿತ ಪರೀಕ್ಷೆಯು ಸಿಬಿಎಸ್‌ಸಿ ವಿಷಯಾಧಾರಿತವಾಗಿ ನಡೆಯಲಿದ್ದು, ಗಣಿತ ಮತ್ತು ವಿಜ್ಞಾನ ವಿಷಯಗಳ ಹೆಚ್ಚಿನ ಪ್ರಶ್ನೆಗಳಿರುತ್ತವೆ.  ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಮೂರು ವರ್ಷಗಳ ಡಿಪ್ಲೋಮಾದಲ್ಲಿ ಶೇ. ೫೦ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.  ಶೈಕ್ಷಣಿಕ ವಿದ್ಯಾರ್ಹತೆಯ ಎಲ್ಲ ಮೂಲ ಅಂಕಪಟ್ಟಿಗಳು ಮತ್ತು ಮೂರು ಸೆಟ್ ಜೆರಾಕ್ಸ್ ಪ್ರತಿಗಳು ಅಲ್ಲದೆ ಇತ್ತೀಚಿನ ೭ ಪಾಸ್‌ಪೋರ್ಟ್ ಅಳತೆಯ ಕಲರ್ ಫೋಟೋಗಳೊಂದಿಗೆ ರ್‍ಯಾಲಿಗೆ ಹಾಜರಾಗಬೇಕು ಎಂದರು.
  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ವಾಯುಪಡೆ ನೇಮಕಾತಿ ರ್‍ಯಾಲಿಯನ್ನು ಅಚ್ಚುಕಟ್ಟಾಗಿ ಜರುಗಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು.  ಕೊಪ್ಪಳ ಜಿಲ್ಲೆಯ ಯುವ ಅಭ್ಯರ್ಥಿಗಳಿಗೆ ಈ ನೇಮಕಾತಿ ರ್‍ಯಾಲಿಯು ಒಂದು ಸುವರ್ಣ ಅವಕಾಶವನ್ನು ಒದಗಿಸಿದ್ದು, ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು ಎಂದು ಕರೆ ನೀಡಿದರು.
  ಸಭೆಯಲ್ಲಿ ಬಾಗಲಕೋಟೆಯ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತುಕ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Thursday, July 18, 2013

ಜಿಲ್ಲಾ ಮಟ್ಟದ ಲೇಖಕರ ಸಮಾವೇಶ


ಕೊಪ್ಪಳ ೧೬ : ಸ್ಥಳೀಯ "ಚಿರಗು ಪ್ರಕಾಶನ"ವು ಬರುವ ಅಗಷ್ಟ್ (೨೦೧೩) ಮೊದಲ ವಾರದಲ್ಲಿ ಕೊಪ್ಪಳದಲ್ಲಿ ಜಿಲ್ಲಾ ಮಟ್ಟದ ಲೇಖಕರ/ಹವ್ಯಾಸಿ ಲೇಖಕರ ಸಮಾವೇಶವನ್ನು ಆಯೋಜಿಸಲು ಮುಂದಾಗಿದ್ದು.  ಸಮಾವೇಶದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ತಮ್ಮ ಸ್ವ ವಿವರದೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಲೇಖಕರು ಕೃತಿ ಪ್ರಕಟಿಸಿದ ಸಂದರ್ಭದಲ್ಲಿ ಸಮಾವೇಶದಲ್ಲಿ ಪ್ರದರ್ಶಿಸುವ ಸಲುವಾಗಿ ಒಂದೊಂದು ಕೃತಿಯನ್ನು ಇದೇ ತಿಂಗಳ ೩೦ನೇ ತಾರೀಖಿನೊಳಗೆ ಕಳುಹಿಸಿಕೊಡಲು ಪ್ರಕಾಶನವು ಪ್ರಕಟಣೆ ಮೂಲಕ ಕೋರಿದೆ.
ಹೆಚ್ಚಿನ ವಿವರಗಳಿಗೆ.
ಡಿ.ಎಂ.ಬಡಿಗೇರ ಉಪನ್ಯಾಸಕರು ಬನಶಂಕರಿ ನಿಲಯ ರಾಘವೇಂದ್ರ ಮೇಟಲ್ ಸ್ಟೊರ್ ಹಿಂದುಗಡೆ ಸಿಂಪಿ ಲಿಂಗಣ್ಣ ರಸ್ತೆ ಕೊಪ್ಪಳ. ಮೊ: ೯೯೬೪೩೨೮೬೭೭, ೭೪೧೧೨೮೫೬೭೭

ಕೊಪ್ಪಳದಲ್ಲಿ ಜು. ೩೧ ರಂದು ವಾಯುಪಡೆ ನೇಮಕಾತಿ ರ್‍ಯಾಲಿ

  ಭಾರತೀಯ ವಾಯುಪಡೆಯು ಗ್ರೂಪ್ "ಎಕ್ಸ್" ವಿಭಾಗದ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ರ್‍ಯಾಲಿಯನ್ನು ಜುಲೈ ೩೧ ರಂದು ಕೊಪ್ಪಳದ  ಜಿಲ್ಲಾ ಕ್ರೀಡಾಂಗಣದಲ್ಲಿ (ಬ್ಯಾಡ್ಮಿಂಟನ್ ಕೋರ್ಟ್)ದಲ್ಲಿ ಆಯೋಜಿಸಲಾಗಿದೆ. 
 ೧ನೇ ಮೇ ೧೯೯೩ ರಿಂದ ೩೦ನೇ ನವೆಂಬರ್ ೧೯೯೬ರ ನಡುವೆ ಜನಿಸಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗವಹಿಸಬಹುದು. ದ್ವಿತೀಯ ಪಿಯುಸಿ ಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಹಾಗೂ ಪ್ರತ್ಯೇಕವಾಗಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅಥವಾ ಮೂರು ವರ್ಷಗಳ ಡಿಪ್ಲೋಮಾ (ಮೆಕ್ಯಾನಿಕಲ್, ಎಲೆಕ್ಟ್ರಿಕ್, ಎಲೆಕ್ಟ್ರಾನಿಕ್ ಸೈನ್ಸ್, ಇನ್ಸಟ್ರುಮೆಂಟೇಷನ್ ಟೆಕ್ನಾಲಾಜಿ, ಇನ್‌ಫಾರ್ಮೇಷನ್ ಟೆಕ್ನಾಲಾಜಿ) ರಲ್ಲಿ ಶೇ. ೫೦ಕ್ಕಿಂತ ಹೆಚ್ಚು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು ಹಾಗೂ ಡಿಪ್ಲೋಮಾ ಅಥವಾ ಎಸ್.ಎಸ್.ಎಲ್.ಸಿ. ಅಥವಾ ದ್ವಿತೀಯ ಪಿಯುಸಿ ಯಲ್ಲಿ ಇಂಗ್ಲೀಷ್ ವಿಷಯದಲ್ಲಿ ೫೦ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಹ ಅಭ್ಯರ್ಥಿಗಳು ಎಲ್ಲ ಮೂಲ ಅಂಕಪಟ್ಟಿಗಳೊಂದಿಗೆ (ಎಸ್.ಎಸ್.ಎಲ್.ಸಿ., ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮಾ) ಮತ್ತು ಅವುಗಳ ಮೂರು ಸೆಟ್ ಜೆರಾಕ್ಸ್ ಪ್ರತಿಗಳನ್ನು ಹಾಗೂ ಇತ್ತೀಚಿನ ೭ ಪಾಸ್‌ಪೋರ್ಟ ಅಳತೆಯ ಭಾವಚಿತ್ರ (ಕಲರ್) ಗಳೊಂದಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ ಹಾಜರಾಗಬೇಕು.
 ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ವೆಬ್‌ಸೈಟ್ www.indianairforce.nic.in  ಅಥವಾ ಇ-ಮೇಲ್  co7asc@dataone.in  ಅಥವಾ ದೂರವಾಣಿ ಸಂಖ್ಯೆ ೦೮೦-೨೫೫೯೨೧೯೯ ಅಥವಾ ಖುದ್ದಾಗಿ ನಂ.೭, ಏರ್‌ಮೆನ್ ಸೆಲೆಕ್ಷನ್ ಸೆಂಟರ್ ನಂ.೧, ಕಬ್ಬನ್ ರಸ್ತೆ, ಬೆಂಗಳೂರು-೫೬೦ ೦೦೧ರಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ .

ಸಹಕಾರ ಸಂಘಗಳ ಚುನಾವಣೆ : ಜು. ೨೦ ರಂದು ಕಾರ್ಯಾಗಾರ

: ಕೊಪ್ಪಳ ಜಿಲ್ಲೆಯಲ್ಲಿರುವ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸುವ ಸಂಬಂಧ ಚುನಾವಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜು. ೨೦ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ.
  ಜಿಲ್ಲೆಯಲ್ಲಿನ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಚುನಾವಣೆ ಜರುಗಿಸಲು ರಾಜ್ಯ ಸಹಕಾರ ಚುನಾವಣಾ ಆಯೋಗ ಈಗಾಗಲೆ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿದೆ.  ಚುನಾವಣೆಯನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಹಾಗೂ ನಿಯಮಗಳನ್ವಯ ಜರುಗಿಸಲು ಚುನಾವಣಾಧಿಕಾರಿಗಳಿಗೆ ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಚುನಾವಣಾ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲ ಚುನಾವಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತರಬೇತಿಗೆ ತಪ್ಪದೆ ಹಾಜರಾಗಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ  ತಿಳಿಸಿದ್ದಾರೆ.

ಸಹಕಾರ ಸಂಘಗಳ ಅಧಿನಿಯಮಕ್ಕೆ ತಿದ್ದುಪಡಿ : ಜು. ೨೪ ರಂದು ತರಬೇತಿ ಕಾರ್ಯಾಗಾರ
ಕೊಪ್ಪಳ ಜು.   ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ೧೯೫೯ ಕ್ಕೆ ಭಾರತದ ಸಂವಿಧಾನದ ೯೭ನೇ ತಿದ್ದುಪಡಿಯನ್ನು ತರಲಾಗಿದ್ದು, ತಿದ್ದುಪಡಿಯಾದ ಅಂಶಗಳನ್ನು ಸಹಕಾರ ಸಂಘಗಳ ಉಪ ನಿಯಮಗಳಿಗೆ ಅಳವಡಿಸಿಕೊಳ್ಳುವ ಕುರಿತು ವಿಷಯ ತಜ್ಞರಿಂದ ತರಬೇತಿ ಕಾರ್ಯಾಗಾರವನ್ನು ಜು. ೨೪ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಒಂದು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.  
  ಜಿಲ್ಲೆಯ ಎಲ್ಲ ಸಹಕಾರ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕರಿ ಈ ತರಬೇತಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕ ಕೆ. ಮುನಿಯಪ್ಪ   ತಿಳಿಸಿದ್ದಾರೆ.