ಕೊಪ್ಪಳದಲ್ಲಿ ಜು. ೩೧ ರಿಂದ ಏರ್‌ಮನ್ ಭರ್ತಿ ರ್‍ಯಾಲಿ :
ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ ಹುದ್ದೆಗಳಿಗೆ ಕೊಪ್ಪಳದಲ್ಲಿ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಈ ರ್‍ಯಾಲಿಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲು ಅವಕಾಶವಿದೆ. ಆದ್ದರಿಂದ ಸುಮಾರು ೧೫೦೦ ರಿಂದ ೨೦೦೦ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕಾಗಿ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಜು. ೩೧ ರಂದು ಎಲ್ಲ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಭ್ಯರ್ಥಿಗಳಿಗೆ ಮಾತ್ರ ಆಗಸ್ಟ್ ೦೧ ರಂದು ವೈದ್ಯಕೀಯ ಮತ್ತು ದೈಹಿಕ ಅರ್ಹತೆ ಪರೀಕ್ಷೆ ನಡೆಯಲಿದೆ. ರ್‍ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಳ್ಳುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್, ಬ್ಯಾರಿಕೇಡ್ ನಿರ್ಮಾಣ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಕ್ರೀಡಾಂಗಣದ ಟ್ರ್ಯಾಕ್ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ತುರ್ತು ನಿರ್ವಹಣೆಗಾಗಿ ಆಂಬುಲೆನ್ಸ್ ಹಾಗೂ ತಜ್ಞ ವೈದ್ಯರು ನೇಮಕಾತಿ ರ್‍ಯಾಲಿ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಎಂ. ಬಿಜುಕುಮಾರ್ ಅವರು ಮಾತನಾಡಿ, ಏರ್‌ಮನ್ ನೇಮಕಾತಿ ರ್‍ಯಾಲಿಯನ್ನು ಮುಕ್ತ ಹಾಗೂ ಪಾರದರ್ಶಕತೆಯಿಂದ ನಡೆಸಲಾಗುವುದು. ಅಭ್ಯರ್ಥಿಗಳು ಯಾವುದೇ ಮದ್ಯವರ್ತಿಗಳ ಆಮಿಷಕ್ಕೆ ಒಳಗಾಗದೆ ತಮ್ಮ ಸ್ವ ಸಾಮರ್ಥ್ಯದಿಂದ ಆಯ್ಕೆ ಆಗಬಹುದಾಗಿದೆ. ಲಿಖಿತ ಪರೀಕ್ಷೆಯು ಸಿಬಿಎಸ್‌ಸಿ ವಿಷಯಾಧಾರಿತವಾಗಿ ನಡೆಯಲಿದ್ದು, ಗಣಿತ ಮತ್ತು ವಿಜ್ಞಾನ ವಿಷಯಗಳ ಹೆಚ್ಚಿನ ಪ್ರಶ್ನೆಗಳಿರುತ್ತವೆ. ಪಿಯುಸಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲೀಷ್ ವಿಷಯಗಳೊಂದಿಗೆ ಮೂರು ವರ್ಷಗಳ ಡಿಪ್ಲೋಮಾದಲ್ಲಿ ಶೇ. ೫೦ಕ್ಕಿಂತ ಹೆಚ್ಚಿನ ಅಂಕಗಳಿಸಿದ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಶೈಕ್ಷಣಿಕ ವಿದ್ಯಾರ್ಹತೆಯ ಎಲ್ಲ ಮೂಲ ಅಂಕಪಟ್ಟಿಗಳು ಮತ್ತು ಮೂರು ಸೆಟ್ ಜೆರಾಕ್ಸ್ ಪ್ರತಿಗಳು ಅಲ್ಲದೆ ಇತ್ತೀಚಿನ ೭ ಪಾಸ್‌ಪೋರ್ಟ್ ಅಳತೆಯ ಕಲರ್ ಫೋಟೋಗಳೊಂದಿಗೆ ರ್‍ಯಾಲಿಗೆ ಹಾಜರಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರು ಮಾತನಾಡಿ, ವಾಯುಪಡೆ ನೇಮಕಾತಿ ರ್‍ಯಾಲಿಯನ್ನು ಅಚ್ಚುಕಟ್ಟಾಗಿ ಜರುಗಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು. ಕೊಪ್ಪಳ ಜಿಲ್ಲೆಯ ಯುವ ಅಭ್ಯರ್ಥಿಗಳಿಗೆ ಈ ನೇಮಕಾತಿ ರ್‍ಯಾಲಿಯು ಒಂದು ಸುವರ್ಣ ಅವಕಾಶವನ್ನು ಒದಗಿಸಿದ್ದು, ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಬಾಗಲಕೋಟೆಯ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತುಕ್ಕರ್, ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್. ಘಾಡಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment